ಪಿತ್ತಾಶ್ಮ   -
ಪಿತ್ತಕೋಶದಲ್ಲಿ ಕಲ್ಲಿನಂತೆ ರೂಪುಗೊಳ್ಳುವ ಘನಾಕೃತಿ (ಗಾಲ್ ಸ್ಟೋನ್) ಇದರಲ್ಲಿ ಮೂರು ಬಗೆಗಳಿವೆ. ಶುದ್ಧ ಕೊಲೆಸ್ಟಿರಾಲ್ ಆಶ್ಮಗಳು, ಶುದ್ಧ ಪಿತ್ತಾರುಣವರ್ಣದ ಆಶ್ಮಗಳು, ಎರಡೂ ಮಿಶ್ರವಾಗಿರುವ ಆಶ್ಮಗಳು. ಪಿತ್ತಾಶ್ಮಗಳಲ್ಲಿ ಕೊಲೆಸ್ಟಿರಾಲ್ ಮತ್ತು ಪಿತ್ತಾರುಣ ಕ್ಯಾಲ್ಸಿಯಮ್ ಬೆರೆತಿವೆ. ರೋಗಸ್ಥಿತಿಯಲ್ಲಿ ಸಾಮಾನ್ಯವಾಗಿ ಕಂಡುಬರುವುವು ಮೂರನೆಯ ಬಗೆಯವು (ಮಿಶ್ರಾಶ್ಮ). ಅನೇಕ ವೇಳೆ ಮಿಶ್ರಾಶ್ಮ ಒಂದಕ್ಕಿಂತ ಹೆಚ್ಚಾಗಿರುತ್ತದೆ. ಇದು ಸಾಂಕ್ರಾಮಿಕದ ಪರಿಣಾಮ. ಕೊಲೆಸ್ಟಿರಾಲ್ ಕಲ್ಲು ಅನೇಕ ವೇಳೆ ಉಪಾಪಚಯ ಕ್ರಿಯಾಜನ್ಯವಾಗಿ ರಕ್ತದ ಕೊಲೆಸ್ಟಿರಾಲಿನ ಆಧಿಕ್ಯದೊಡನೆ ಸಂಬಂಧ ಹೊಂದಿದೆ. ಪಿತ್ತವರ್ಣಕಗಳು ಹೆಚ್ಚಾಗಿ ಹೊರಸೂಸುವುದರ ಪರಿಣಾಮವಾಗಿ ಬಣ್ಣದ ಕಲ್ಲು ಜನಿಸುತ್ತದೆ. ಕೊಲೆಸ್ಟಿರಾಲ್ ವಿಧದ ಒಂಟಿಕಲ್ಲು ಸಾಮಾನ್ಯವಾಗಿ ಬೊಜ್ಜಿನ ಮನುಷ್ಯರಲ್ಲಿ, ಅದರಲ್ಲೂ ಹಲವು ಮಕ್ಕಳ ತಾಯಿಯಾದ ಸ್ತ್ರೀಯಲ್ಲಿ, ತಲೆದೋರುತ್ತದೆ. ಸಾಂಕ್ರಾಮಿಕಕ್ಕೆ ಈಡಾಗಿ ಪಿತ್ತಕೋಶದಲ್ಲಿ ಬ್ಯಾಕ್ಟೀರಿಯ ವಾಸಿಸುತ್ತಲೇ ಇದ್ದರೆ ಮಿಶ್ರ ಮಾದರಿಯ ಹಲವು ಪಿತ್ತಾಶ್ಮಗಳು ರೂಪುಗೊಳ್ಳುತ್ತವೆ. ಈ ತೆರದ ಪಿತ್ತಾಶ್ಮಗಳನ್ನು ಅವುಗಳೊಳಗೆ ಜೀವಿಸುವ ಜೀವಾಣುಗಳ ಸ್ಮಾರಕಗಳೆಂದು ಹೇಳಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ